ಬಂಟಿಂಗ್ - 
	ಎಂಬರಿಜಿಡೀ ಕುಟುಂಬಕ್ಕೆ ಸೇರಿದ ಹಕ್ಕಿಗಳ ಸಾಮಾನ್ಯ ಹೆಸರು. ಪ್ಯಾಸೆರಿಫಾರ್ಮೀಸ್ ಗಣದ ಗುಬ್ಬಿಗಳನ್ನು, ಫಿಂಚ್‍ಗಳನ್ನು ಹೋಲುತ್ತವೆ. ಎಂಬ ರಿಜ ಮೆಲನೊಕಿಫಾಲ ಎಂಬ ಕಪ್ಪು ತಲೆಯ ಮತ್ತು ಎಂಬರಿಜ ಬ್ರನಿಸೆಪ್ಸ್ ಎಂಬ ಕೆಂಪು ತಲೆಯ ಬಂಟಿಂಗ್‍ಗಳು ಸಾಮಾನ್ಯವಾಗಿ ಚಳಿಗಾಲದಲ್ಲಿ ಭಾರತಕ್ಕೆ ವಲಸೆ ಬರುತ್ತವೆ. ಈ ಪ್ರಬೇಧಗಳಲ್ಲಿ ಹೆಣ್ಣು ಹಕ್ಕಿಯ ಬೆನ್ನು ನಸುಗೆಂಪು ಮಿಶ್ರಿತ ಹಳದಿ ಅಥವಾ ಕಂದು ಬಣ್ಣದ್ದು. ಮುಸುಕಿನ ಜೋಳ, ಗೋದಿ ಮುಂತಾದ ಬೆಳೆಗಳನ್ನು ತಿನ್ನುವುದರಿಂದ ಪಿಡುಗುಗಳೆನಿಸಿವೆ. ಕೆಂಪು ತಲೆಯ ಹಕ್ಕಿಗಳು ಪಶ್ಚಿಮ ಪಾಕಿಸ್ತಾನದಲ್ಲೂ, ಕಪ್ಪು ತಲೆಯವು ಪೂರ್ವ ಯೂರೋಪು ಹಾಗೂ ಪಶ್ಚಿಮ ಏಷ್ಯದಲ್ಲೂ ಸಂತಾನೋತ್ಪತ್ತಿ ನಡೆಸುತ್ತವೆ.

	ಇತರ ಪ್ರಭೇದಗಳ ಪೈಕಿ ಮುಖ್ಯವಾದವು ಪರ್ವತ ಪ್ರದೇಶಗಳಲ್ಲಿ ವಾಸಿಸುವ ಎಂಬರಿಜ ಸಿಯ ಮತ್ತು ಧ್ರುವ ಪ್ರದೇಶದ ಬಿಳಿ ಪುಕ್ಕಗಳ ಪ್ಲೆಕ್ಟ್ರೊಫೀನ್ಯಾಕ್ಸ್ ನಿವ್ಯಾಲಿಸ್ ಹಾಗೂ ಹಳದಿ ಬಣ್ಣದ ಎದೆಯುಳ್ಳ ಎಂಬರಿಜ ಅರಿಯೋಲ ಎಂಬವು. ಈ ಹಕ್ಕಿಗಳು ತೆರೆದ ಬಟ್ಟಲಿನಾಕಾರದ ಗೂಡುಗಳನ್ನು ನೆಲಕ್ಕೆ ಸಮೀಪದಲ್ಲಿ, ಪೊದೆಗಳಲ್ಲಿ, ಕುಳ್ಳುಮರದ ರೆಂಬೆಗಳಲ್ಲಿ ರಚಿಸುತ್ತವೆ. ಸುಮಾರು 2 ರಿಂದ 6 ಮೊಟ್ಟೆಗಳನ್ನಿಟ್ಟು ಹೆಣ್ಣು ಹಕ್ಕಿ ಕಾವು ಕೊಟ್ಟು ಮರಿಮಾಡುತ್ತದೆ. ಕೆಲವೊಮ್ಮೆ ಗಂಡುಹಕ್ಕಿ ಕಾವು ಕೊಡಲು ಸಹಕರಿಸುವುದೂ ಉಂಟು. ಮೊಟ್ಟೆಗಳು ಮಾಸಲು ಬಣ್ಣದವು. ಅಲ್ಲಲ್ಲಿ ಚಿಕ್ಕ ಚಿಕ್ಕ ಚುಕ್ಕಿಗಳಿವೆ. ಬಂಟಿಂಗ್ ಒಂದು ವರ್ಷದಲ್ಲಿ ಹಲವು ಬಾರಿ ಮೊಟ್ಟೆ ಇಡುತ್ತದೆ.

	ಹಲವೊಮ್ಮೆ ಫ್ರಿಂಜಿಲ್ಲಿಡೀ ಕುಟುಂಬಕ್ಕೆ ಸೇರಿದ ನೂತನ ಲೋಕದ ಗುಬ್ಬಚ್ಚಿ ಮತ್ತು ಫಿಂಚ್‍ಗಳನ್ನು ಬಂಟಿಂಗ್‍ಗಳೆಂದು ಕರೆಯುವುದುಂಟು. ನೂತನ ಲೋಕದ ಈ ಹಕ್ಕಿಗಳ ಗಂಡುಗಳು 115 ರಿಂದ 140 ಮಿಮೀ ಗಳಷ್ಟು ಉದ್ದವಾಗಿವೆ. ಹೆಣ್ಣು ಹಕ್ಕಿಗಳು ಗಂಡುಗಳಿಗಿಂತ ಚಿಕ್ಕವು ಮತ್ತು ಮಾಸಲು ಬಣ್ಣದ ಗರಿಗಳನ್ನು ಪಡೆದಿವೆ. ಗಂಡು ಬಂಟಿಂಗ್‍ಗಳಿಗೆ ಬಣ್ಣದ ಗರಿಗಳಿವೆ. ನೂತನ ಲೋಕದ ಬಂಟಿಂಗ್‍ಗಳ ಪೈಕಿ ರಂಗುರಂಗಿನ ಪ್ಯಾಸ್ಸರಿನ ಸಿರಿಸ್, ನೀಲವರ್ಣದ ಪ್ಯಾಸ್ಸರಿನ ಸೈನಿಯ, ಉಜ್ವಲ ನೀಲವರ್ಣದ ಪ್ಯಾಸ್ಸರಿನ ಅಮೀನ ಮತ್ತು ವಿವಿಧ ಬಣ್ಣಗಳಿರುವ ಪ್ಯಾಸ್ಸರಿನ ವೆರ್ಸಿಕಲರ್ ಮುಖ್ಯವಾದ ಪ್ರಭೇದಗಳು.
(ಎಂ.ಎಸ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ